ಭೃಗು
	ಒಬ್ಬ ಮಹರ್ಷಿ. ಬ್ರಹ್ಮನ ಹೃದಯದಿಂದ ಹುಟ್ಟಿದ ಈತ ಸ್ವಾಯಂಭು ಮನ್ವಂತರದವ. ಈತನ ವಂಶದವರೇ ಭಾರ್ಗವರು. ಈತನಿಗೆ ಖ್ಯಾತಿ ಎಂಬವಳು ಪತ್ನಿ. ಈಕೆಗೆ ಲಕ್ಷ್ಮಿ ವರನೀಡಿ ಅದನ್ನು ನೆರವೇರಿಸಲು ಈಕೆಯ ಉದರಲ್ಲಿ ಮಗಳಾಗಿ ಜನಿಸಿದಳು. ಅದರಿಂದ ಭಾರ್ಗವೀ ಎಂದೂ ಹೆಸರಾಯಿತು. ಭೃಗುವಿಗೆ ಖ್ಯಾತಿಯ ಗರ್ಭದಲ್ಲಿ ಧಾತ ವಿಧಾತರೆಂಬ ಪುತ್ರರೂ ಜನಿಸಿದರು.ಇವರಲ್ಲಿ ಪ್ರಣುಂಡ, ಮೃಕಂಡು,ಮಾರ್ಕಂಡೇಯ, ಭವನಾರಾಯಣ ಮತ್ತು ಜನಿಸಿದರು ಇವರೆಲ್ಲ ಭಾರ್ಗವ ಪದ್ಮಶಾಲಿಗಳೆಂದು ಕರೆಯಲಾಗುತ್ತದೆ.

	ವೈವಸ್ವತ ಮನ್ವಂತರದಲ್ಲಿ ಭೃಗು ವರುಣದೇವನ ಯಜ್ಞಕುಂಡದಲ್ಲಿ ಜನಿಸಿದ. ಆದ್ದರಿಂದಲೇ ಈತ ವಾರುಣಿಯೆನಿಸಿಕೊಂಡ. ತಂದೆಯ ಉಪದೇಶದಂತೆ ವಾರುಣಿ ತಪಸ್ಸು ಮಾಡಿ ಬ್ರಹ್ಮಜ್ಞಾನ ಪಡೆದ. ಪುಲೋಮೆ ಈತನ ಪತ್ನಿ. ಇವರಿಗೆ ಚ್ಯವನ, ವಜ್ರ ಶೀರ್ಷ, ಶುಚಿ, ಔರ್ವ, ಶುಕ್ರ, ವರೇಣ್ಯ, ಸವನರೆಂಬ ಏಳು ಜನ ಪುತ್ರರು.

	ಶುಕ್ರಚಾರ್ಯನ ತಾಯಿ ಉಶಾನಳ (ಭೃಗುವಿನ ಪತ್ನಿ) ತಲೆಯನ್ನು ವಿಷ್ಣು ಕತ್ತರಿಸಲು ಕೋಪಗೊಂಡ ಭೃಗು ಅವನಿಗೆ ಅನೇಕ ಅವತಾರ ಎತ್ತಿ ಗರ್ಭವಾಸ ಅನುಭವಿಸುವಂತೆ ಶಾಪ ಕೊಟ್ಟನೆಂದು ದೇವೀ ಭಾಗವತದಿಂದ ಗೊತ್ತಾಗುತ್ತದೆ. ಅಗ್ನಿ ಸರ್ವಭಕ್ಷಕನಾಗುವಂತೆ ಭೃಗು ಶಾಪ ಕೊಟ್ಟನೆಂದು ಭಾರತದಿಂದ ತಿಳಿಯುತ್ತದೆ.

	ನಹುಷನಿಗೆ ಇಂದ್ರಪಟ್ಟ ದೊರೆತಾಗ, ತನ್ನ ಪಲ್ಲಕ್ಕಿಯನ್ನು ಆತ ಸಪ್ತರ್ಷಿಗಳಿಂದ ಹೊರಿಸಿಕೊಂಡು ಹೋದದ್ದು ಪ್ರಸಿದ್ಧವಾದ ಕಥೆ. ಈ ಸಪ್ತವಾಹಕರಲ್ಲಿ ಭೃಗುವೂ ಒಬ್ಬ. ಭರದ್ವಾಜ ಮಹರ್ಷಿಗೆ ಸೃಷ್ಟಿ ವಿವರಣೆಯನ್ನು ತಿಳಿಸಿದನೆಂದು ಶಾಂತಿಪರ್ವದಿಂದ ತಿಳಿಯುತ್ತದೆ.	 					
	 (ಎಸ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ